WhatsApp post by Subraya Hegde
ಹುಟ್ಟು ಹಬ್ಬ
""ಹ್ಯಾಪ್ಪೀ ಬರ್ತ್ಡೇ ಡ್ಯಾಡೀ,"
ಸರಿಯಾಗಿ ೧೨ ಘಂಟೆಗೆ ಮಗನ ಫೋನ್ ಬಂದಿತು.
"ಎಲ್ಲಿದ್ದೀಯಾ" ಕೇಳಿದೆ'.
"ಇಲ್ಲೇ ಪಿಚ್ಚರ್ ಟಾಕೀಸೀಗ್ ಬಂದಿದ್ದೀವಿ, ವಿಶ್ ಮಾಡಲು ಲೇಟ್ ಆದೀತು ಅಂತ ಫೋನೇ ಮಾಡಿದೆ" ಅಂದ.
"ಆಯಿತು" ಅಂತ ಹೇಳಿ ಚಾದರ ಎಳೆದುಕೊಂಡೆ.
ಮತ್ತ್ ಟ್ರೀಣ್. ಟ್ರೀಣ್, ಶಬ್ದ ಆಯಿತು.
ಬಾಗಿಲು ತೆಗೆದೆ. ಅಪಾರ್ಟ್ಮೆಂಟಿನ ಣಾಲ್ಕೈದು ಕುಟುಂಬನೇ ಹಾಜರ್ರು..
"ಸಾರ್, ಹೆಪ್ಪೀ ಬರ್ಥ್ಡೇ" ಅಂತ ಹೇಳಿ ಹೂಗೊಂಚಲು ಕೊಟ್ಟರು. ಒಬ್ಬೊಬ್ಬರಾಗಿ ಎಲ್ಲರೂ "ಅಂಕಲ್ ಆಶೀರ್ವಾದ ಮಾಡಿ" ಎನ್ನುತ್ತಾ ಕಾಲಿಗೆ ಬಿದ್ದರು. ಅವರವರ ಅಂತಸ್ತಿಗೆ ತಕ್ಕಂತೆ ಸಾಷ್ಟಾಂಗ, ಅರ್ಧ ಸಾಷ್ಟಾಂಗ ಹೀಗೇ ಬೇರೆ ಬೇರೆ ತರಹದ ನಮಸ್ಕಾರಗಳನ್ನು ಮಾಡಿದರು.
"ಅಲ್ಲಾ, ನಾಳೆ ಮುಂಜಾನೆ ಮಾಡಿದ್ರೆ ಆಗ್ತಾ ಇತ್ತಲ್ವಾ?”
"ಇಲ್ಲ, ಸಾರ್, ನಾವ್ ಏಳೂ ಹೊತ್ತೀಗ್ ನೀವ್ ಆಫೀಸ್ಗ್ ಹೋಗ್ ಬಿಟ್ಟಿರ್ತೀರಿ. ಮತ್ತೆ,....೧೨ ಘಂಟೆಗ್ ವಿಶ್ ಮಾಡೂ ಮಜಾನೇ ಬೇರೆ. ಬನ್ನಿ ಸಾರ್, ಫೋಟೋ ತಗೊಳ್ಳೋಣ. ಆಂಟೀನೂ ಕರೀರಿ ಸಾರ್".
ನಾನ್ ಒಳ್ಗಡೆ ಹೋದ್ ತಕ್ಷಣ, " ನಿಮ್ಗ್ ಬೇರೆ ಕೆಲ್ಸ ಇಲ್ವಾ?, ರಾತ್ರಿ-ಹಗ್ಲೂ ಏನೂ ಇಲ್ಲ. ಸರ್ಯಾಗ್ ನಿದ್ದೆ ಮಾಡ್ಲಿಕ್ಕೂ ಬಿಡೋದಿಲ್ಲ! ಹಾಲ್ನಲ್ಲೇ ನಿಮ್ ಬರ್ತ್ಡೇ ಮುಗೀಸ್ಬಿಡಿ".
"ಹಾಗಲ್ವೇ.., ಅವ್ರೇನೋ ಫೋಟೋ ತಗೋತಾರಂತೆ..."
"ಓಕೇ ಹಾಗಾದ್ರೆ. ಸ್ವಲ್ಪ ಇರಿ. ನಾ ರೆಡೀ ಆಗ್ ಬರ್ತೀನಿ. ನೀವ್ ಅಲ್ಲಿ ತನ್ಕ ಹಾಲ್ನಲ್ಲೇ ಇರಿ."
ಅರ್ಧ ಘಂಟೆ ನಂತರ ಬಾಗಿಲು ತೆರೆದಾಗ, ನನ್ನ ಹೆಂಡತಿ ಮದುಮಗಳಂತೆ ಶೃಂಗಾರವಾಗಿ ಬಂದಳು.
"ನಾನೂ ಸ್ವಲ್ಪ ತಯಾರಾಗಿ ಬರ್ಲಾ?"
"ನಿಮ್ಗೇನು? ಒಂದ್ ಲುಂಗೀ-ಶರ್ಟು ಹಾಕ್ಕೊಂಡ್ ಬಂದ್ಬಿಡಿ ಬೇಗ.”
ಫೋಟೋ ಪ್ರೋಗ್ರಾಮ್ ಎಲ್ಲಾ ಮುಗಿದು ಮಲಗಿದಾಗ ೨ ಘಂಟೆ.
ಮತ್ತೆ ಟ್ರೀಣ್..ಟ್ರೀಣ್..
"ಮಗ-ಸೊಸೆ..ಕೇಕ್ ಹಿಡಿದು ಬಾಗಿಲಲ್ಲಿ ಪ್ರತ್ಯಕ್ಷ.
"ಬನ್ನಿ ಮಲಗ್ಕೊಳ್ಳಿ" ಅಂದೆ.
"ಇಲ್ಲ, ಕೇಕ್ ಫ್ರೆಶ್ ಇರೊವಾಗ್ಲೇ ಸೆಲೆಬ್ರೇಟ್ ಮಾಡೊಣ".
ಮತ್ತೆ ಸೆಲೆಬ್ರೇಶನ್ ಆಗಿ ಮಲಗಲು ೩ ಘಂಟೆ.
ಮತ್ತೆ ಮೊಬೈಲ್ನಲ್ಲಿ ಮೆಸೇಜ್ಗಳ ಶಬ್ದ ಬರುತ್ತಲೇ ಇತ್ತು.
ಮುಂಜಾನೆ ೬ ಘಂಟೆಗೆ ಹೋಗದಿದ್ದರೆ ಹಾಲು ಸಿಗುವದಿಲ್ಲ.
೬ ಘಂಟೆಗೆ ಎದ್ದು ಹಾಲಿನ ಅಂಗಡಿಗೆ ಹೋದರೆ,
"ಸಾರ್, ಇದೇನು ವಿಚಿತ್ರದ ಮಾಸ್ಕ್ ಹಾಕ್ಕೊಂಡ್ ಬಂದಿದ್ದೀರಿ" ಎಂದ.
ನೋಡಿದರೆ, ಅದು ಚಡ್ಡಿಯಾಗಿತ್ತು. ಮಾಸ್ಕ್ ಮತ್ತು ಚಡ್ಡಿ ಒಟ್ಟಿಗೇ ಒಣಹಾಕಿದ್ದರಿಂದ ಅವಸರದಲ್ಲಿ (ಸ್ವಲ್ಪ ಕತ್ತಲೆ ಕೂಡಾ) ಗೊತ್ತೇ ಆಗಿರಲಿಲ್ಲ
ರವಿವಾರವಾದ ಕಾರಣ ಆಫೀಸಿನ ಜಂಜಾಟವಿರಲಿಲ್ಲ.
ಮಧ್ಯಾಹ್ನದ ಸಮಯಕ್ಕೆ ಮತ್ತೆ ನನ್ನ ಅರ್ಧಾಂಗಿಯ ಸ್ವಯಂ ಕೃತ ಕೇಕ್ ತಯಾರಾಗಿತ್ತು.
"ಇದರ ಬದಲು ಹಲಸಿನ ಹಣ್ಣಿನ ಇಡ್ಲಿ ಮಾಡಿದ್ದರೆ ರುಚಿಯಾಗಿ ತಿನ್ನಬಹುದಿತ್ತಲ್ಲ?" ಎಂದೆ.
"ಸುಮ್ನೆ ಮಾಡಿದ್ದನ್ನ್ ತಿನ್ನಿ".
ಅಂತೂ ಕೇಕ್ ತುಂಡರಿಸಿ ತಿಂದು ಊಟಕ್ಕೆ ತಯಾರಾದೆವು
ಏನೇನೋ ಉತ್ತರ ಭಾರತ, ಆಂಧ್ರ, ತಮಿಳ್ನಾಡು..ಅಡಿಗೆಗಳು ಅವುಗಳ ಹೆಸರೂ ಹೇಳಲು ಬರುತ್ತಿಲ್ಲ.
ಊಟ ಮಾಡಿ ಮಲಗುತ್ತಿದ್ದಂತೆ ಹೊಟ್ಟೆಯಲ್ಲಿ ಏನೇನೋ ಡೊಂಬರಾಟಗಳು.
೩-೪ ಗುಳಿಗೆಗಳನ್ನು ನುಂಗಿ ಎರಡು ತಾಸು ಮಲಗಿದಾಗ ಸ್ವಲ್ಪ ಆರಾಮವಾದಂತೆ ಅನಿಸಿತು.
ಸಂಜೆ ಸ್ವಲ್ಪ ಅನ್ನ-ಮಜ್ಜಿಗೆ ಉಂಡು ಮಲಗೋಣವೆಂದರೆ, "ಇಂದು ಸ್ವಲ್ಪ ಲೇಟಾಗಿ ಊಟ ಮಾಡೋಣ" ಎಂದು ಆಜ್ಞೆಯಾಯಿತು.
"ನಿದ್ದೆ ಬರುತ್ತಿದೆ, ಸ್ವಲ್ಪ ಮಲಗಿ ಬರುತ್ತೇನೆ" ಎಂದು ಹೇಳಿ ಒಳಗಡೆ ಹೋದೆ.
ಸರಿಯಾಗಿ ೧೧-೫೫ಕ್ಕೆ ಮತ್ತೆ ಗಂಟೆಯ ಶಬ್ದ.
ಹೊರಗೆ ಬಂದು ನೋಡಿದರೆ, ಪಕ್ಕದ ಮನೆಯ ಕುಟುಂಬ ಬಾಗಿಲಲ್ಲಿ ನಿಂತಿದೆ.
"ನಮ್ ಯಜ್ಮಾನ್ರ್ ಬರ್ತ್ಡೇ ನಾಳೆ ಅದೇರಿ. ಅದ್ಕೇ ನಿಮ್ದು-ಅವ್ರದ್ದೂ ಒಟ್ಟಿಗೇ ಮಾಡೋಣ ಅಂತ್ ಹೇಳಿ ಯೆಲ್ಲಾ ರೆಡೀ ಮಾಡ್ಕೊಂಡೇ ಬಂದೀವ್ರೀ..."
ಎನ್ನುತ್ತಾ ಅವರ ಶ್ರೀಮತಿಯವರು ಒಳಗೆ ಕಾಲಿಟ್ಟರು.
ಎಲ್ಲರ ಕಯ್ಯಲ್ಲಿ ಹುಟ್ಟು ಹಬ್ಬದ ಸಲುವಾಗಿ ತಯಾರು ಮಾಡಿದ ಭಕ್ಷ್ಯಗಳಿದ್ದವು.
"ಕೇಕ್ ನಮ್ ಸೊಸಿನೇ ಮಾಡ್ಯಾಳ್ರಿ, ಪ್ಯೂರ್ ವೆಜ್ಜು. ನಮ್ ನಾಯಿ ಬರ್ತ್ಡೇ ದಿನಾನೂ ಅದ್ನೇ ಮಾಡ್ತೀವ್ರಿ. ಅದೂ ಪ್ಯೂರ್ ವೆಜ್ಜೂ. ನಮ್ ಮನ್ಯವ್ರೂ ಹಾಗೇನೇ, ನಾನ್ವೆಜ್ ಕೇಕ್ ತಿನ್ನೋ ಹಾಗಿಲ್ಲ. " ಅವರ ಶ್ರೀಮತಿಯವರು ಹೇಳಿದರು.
"ಮೆಡಿಸಿನ್ನಲ್ ಏನೇನ್ ಹಾಕ್ತಾರೆ ಅಂತ್ ಗೊತ್ತಿಲ್ಲ. ಅದ್ನೆಲ್ಲಾ ತಿಂತಾರೆ. ಕೇಕ್ ಅಂದ್ರೆ ಎಗ್ ಹಾಕ್ಬಾರ್ದು ಅಂತಾರೆ" ಮಗನು ಗೊಣಗುತ್ತಿದ್ದ.
ಅಷ್ಟರಲ್ಲಿ ಪಕ್ಕದ ಇನ್ನೊಂದು ಮನೆಯ ಕುಟುಂಬವೂ ಬಂದಿತು.
"ಅಂಕಲ್, ಆಪ್ ದೋನೋ ಲೋಗೋಂಕಾ ಬರ್ತ್ಡೇ ಹಮ್ ಭೀ ಮನಾಯೆಂಗೆ".
ಹಾಗೆಯೇ ಅವರ ಪುಟ್ಟ ಮಗು, "ಪಾಪಾ, ಆಪ್ ಔರ್ ಮಾ ಅಂಕಲ್ ಕೊ ಪಕ್ಡಿಯೇ" ಎನ್ನುತ್ತಲೇ ಒಬ್ಬರು ಕಯ್ಯಿ, ಇನ್ನೊಬ್ಬರು ಕಾಲು ಹಿಡಿದು ನನ್ನನ್ನು ಮೇಲಕ್ಕೆತ್ತಿದರು. ಹುಡುಗನು ಓಡಿ ಬಂದು ನನ್ನ ಬೆನ್ನು, ಸೊಂಟಕ್ಕೆ ಚನ್ನಾಗಿ ಒದೆ ಕೊಟ್ಟ.
"ಕ್ಯಾ ಬೇಟಾ, ಬಡೇ ಲೋಗೋಂಕೊ ಐಸೆ ನಹೀ ಕರ್ತೇ ಹೈ". ಅಂದಿದ್ದಕ್ಕೆ,
"ಪಾಪಾ, ಹಮಾರೆ ದೋಸ್ತೋಂಕಾ ಬರ್ತ್ಡೇ ಐಸೇ ಹೀ ಮನಾತೇ ಹೈ" ಅನ್ನಬೇಕೇ?!.
ಮತ್ತೆ ಅದೇ ಉತ್ತರ-ದಕ್ಷಿಣ ಭಾರತಗಳ ಊಟ ಮಾಡಿ ಮಲಗುವಾಗ ೨ ಗಂಟೆ.
ಮುಂಜಾನೆ ೬ ಗಂಟೆಗೆ ಎದ್ದು ತಯಾರಾಗಿ ೭.೩೦ ಕ್ಕೆ ಆಫೀಸಿಗೆ ಹೋಗಬೇಕು.
ಹೊಟ್ಟೆ ಬೇರೆ ಪೂರ್ತಿ ಕೆಟ್ಟು ಹೋಗಿತ್ತು.
ಎರಡು ದಿನ ರಜೆ ಬೇಕೆಂದು ಅರ್ಜಿ ಕಳಿಸಿದೆ.
ಎರಡು ದಿನ ಬಿಟ್ಟು ಆಫೀಸಿಗೆ ಹೋದರೆ,
"ಹೆಗ್ಡೆಯವ್ರೆ, ನಿಮ್ ಬರ್ತ್ಡೇ ಸೆಲೆಬ್ರೇಟ್ ಮಾಡೋಣ ಅಂತ ಎರ್ಡ್ ದಿನದಿಂದಾ ಕಾಯ್ತಾ ಇದ್ದೀವಿ. ಕೇಕು, ಎಲ್ಲಾ ರೆಡೀ ಮಾಡ್ಬಿಟ್ಟಿದ್ದೀವಿ. ಹಾಗೇ, ಚೋಲೆ-ಭಟೂರೆ, ಗೋಲ್ಗಪ್ಪೆ, ಸೂಜಿ ಹಲ್ವಾ, ರಸ್ಗುಲ್ಲಾ, ಎಲ್ಲಾ ಮಾಡ್ಸಿದ್ದೀವಿ".ಎನ್ನಬೇಕಾ?
ಹಾಗೆಯೇ ಪಕ್ಕದಲ್ಲಿದ್ದ ನನ್ನ ಮಿತ್ರ ಹೇಳುತ್ತಿದ್ದ, "ಹೆಗ್ಡೇರೆ, ನೋಡಿ, ಹುಟ್ಟುಹಬ್ಬ-ತಿಥಿ ಎರಡರಲ್ಲೂ ಸಾಮ್ಯ ಅಂದ್ರೆ ನಮ್ಗ್ ಇಷ್ಟ ಆಗಿರೋ ತಿಂಡಿ ಇರೋದಿಲ್ಲ".
ಸುಬ್ರಾಯ ಹುಳಸೇಮಕ್ಕಿ
No comments:
Post a Comment
Note: Only a member of this blog may post a comment.