Friday, July 24, 2020

MAGAZINE

Ramesh Nadgir:

*_ನಾನಿಲ್ಲಿ ಅಮೇರಿಕದಾಗ-ಜೀವ  ಎಲ್ಲಾ ಅಲ್ಲಿ ಧಾರವಾಡದಾಗ.._*
 ****************

ಏರಿಕೇರಿಗಳ ಊರು ನಮ್ಮೂರ್ರೀ 
ಕಣ್ಣು ಹಾಯ್ಸಿದಷ್ಟೂ ದಿನ್ನೆ ಕೊಳ್ಳಾರಿ 
ಧಾರಾಕಾರ ಮಳೆ ಕೆಸರಿಗೆ 
ಕಮ್ಮಿ ಏನಿಲ್ರಿ |
ಮಲೆನಾಡಂಚಿನ ಬಯಲು ಸೀಮೇರಿ 
ಒಂದಾನೊಂದ್  ಕಾಲ್ದಾಗ ಕೆರೆಗಳ ಊರಂತ್ರಿ 
ಆದರೀಗ ಮಳೆ ಬಂದ್ರ 
ಊರೆಲ್ಲಾ ಕೆರೆಯಂತ್ರೀ..
ಎತ್ತಿನಗುಡ್ಡ ಕಾಲೇಜ್ದಿಂದ ಹುಬ್ಳೀ ಕಡೆ ಹಳೆಹಾಯ್ವೇ ಹಿಡ್ದ ಹೊರಟ್ರ ಎಡಗಡೆ ಏರಿ ಮಣ್ಣರಿ ಬಲಕ್ಕ್ ಕೆಂಪಮಣ್ಣರಿ..

ನವಲೂರು ಅಂಚಿಂದ ಶುರುವಾತ್ ಆಗೇದ್ರಿ 
ಪ್ರಕೃತಿ ಸೊಬಗಿಗೆ ನವಿಲಿಲ್ಲಿ ಹಾಡಿ ಕುಣಿದಾವ್ರಿ..
ಇಲ್ಲಿಯ ಪ್ಯಾರಲ, ಕಲಮಿ ತಿಂದ್ರ ನೀವು ಬಾಯಿ ಚಪ್ಪರಸ್ತೀರಿ..

ದಿನ್ನೇಮ್ಯಾಲೆ ಕಾಣೋದೇ ನರಿಮಡ್ಡಿ, ಅಂದ್ರ ಈಗಿನ ವಿದ್ಯಾಗಿರಿ
ವಿದ್ಯಾಕಾಶಿಯಲಿ ಕಣ್ಣು ಹಾಯಿಸಿದಲ್ಲೆಲ್ಲ ವಿದ್ಯಾರ್ಥಿಗಳೇರಿ..

ವಿಮಾನ ನಿಲ್ದಾಣದಿಂದ್ ನುಗ್ಗಿ ಬಂದ್ರ ನುಗ್ಗಿಕೇರಿರಿ 
ಹರಕೆ ಈಡೇರಿಸೋ  ಬಲಭೀಮ ಹನುಮಪ್ಪ ಇಲ್ಲೇ
ನೆಲೆನಿಂತಾನ್ರಿ ..

ಚುಕುಬುಕು ರೈಲಿಳ್ದ ಹೊರಬಿದ್ರ ಮಾಳಮಡ್ಡಿರಿ 
ಇಲ್ಲಿನ್ನೂ ಸಂಪ್ರದಾಯಸ್ಥ ಮಂದಿ  ತುಂಬಿತುಳಕ್ಯಾವ್ರಿ |
ಏರಿಳಿದರೊಂದ್ ಗೌಳ್ಯರ ದಡ್ಡಿರೀ 
ಅದಕ್ ಹತ್ತಿ ಇರೋದ ೨೦-೩೦ ಗುಂಟೆ ಕಂಪೌಂಡ ಇರೊ ಸಾರಸ್ವತಪುರಾರೀ..

ಇನ್ನೊಂದ್ ಬಗಲಿಗೆ 
 ವನವಾಸಿ ರಾಮಮಂದಿರಾರಿ 
ಅದರಹಿಂದಿರೋದೇ ಕೆ ಇ ಬೋರ್ಡ್ ಶಾಲೇರಿ |
ಇಲ್ಲೋದಿದೋರು ವಿಶ್ವದ್ ಮೂಲಿಮೂಲ್ಯಾಗ ಧಾರ್ವಾಡ್ದ
ಹೆಸರಾ ಮೆರ್ಸ್ಯಾರ್ರೀ..

ಹಾಂಗ ಮುಂದ ಬಂದ್ರ ಎಮ್ಮಿಯೂ ಇಲ್ಲದ ಕೆರೆಯೂ ಕಾಣದ ಎಮ್ಮಿಕೇರಿರಿ 
ಉಳವಿ ಎಲ್ಲೈತಿಅಂತ ತಿಳಿಲಾರ್ದ್ ಬಸವಣ್ಣ ಕುಂತಾನ್ರಿ..

ಇನೊಂದ ದಿಕ್ಕಿನಿಂದ ಹೊರಟರ ಮದಿಹಾಳ ಹೆಬ್ಬಳ್ಳಿ ಅಗಸಿ ನಡು ಸಿಗೋದ ವಿಕ್ಟೋರಿಯಾ ಹೈಸ್ಕೂಲ್ರಿ ಅಂದ್ರ ಈಗಿನ ನಮ್ಮ ವಿದ್ಯಾರಣ್ಯ ಹೈಸ್ಕೂಲ್ರಿ...

 ಹಾವೇರಿ ಪ್ಯಾಟಿ, ಮರಾಠಾ ಕಾಲನಿ
ಅಲ್ಲೇ  ಮಲ್ಲಸಜ್ಜನ ವ್ಯಾಯಾಮಶಾಲ್ಯಾಗ ಮಸ್ಕಿ ಹೊಡದ್ ಹೊರಟ್ರ ಮ್ಯಾಲ ಎರಕಿಗೆ ಕಾಣೋದೇ ಕಿತ್ತೂರ ಚನ್ನಮ್ಮಾ ಪಾರ್ಕ್.  ರಾಣಿ ಚನ್ನಮ್ಮಾ ಖಡ್ಗದಲೆ ಥ್ಯಾಕರೆನ  ರುಂಡಾ ಹಾರ್ಸಿದ್ರ ಅದ ಇಲ್ಲಿ ಬಂದ ಬಿದ್ದಿತ್ತಂತರೀ ಅಲ್ಲೆ ಥ್ಯಾಕರೆನ ಗೋರಿ ಅದರಿ..
ಈ ನಾಡಿಗೆಲ್ಲಾ ಖ್ಯಾತನಾಮಗಳನ್ನ ಕೊಟ್ಟ ಕರ್ನಾಟಕ ಕಾಲೇಜ್ರಿ |
ಕಲ್ಲಳತೆ ದೂರಕಿರೋದೇ ಆಕಾಶವಾಣಿರಿ..ಅದ ಗೀಳಿವಿಂಡ, ಅಕ್ಕಮ್ಮಾ ಕಾಕಾ ಸಣ್ಣಕ್ಕಾ...ಯಮುನಾಮೂರ್ತಿಯವರ ನಡೆಸಿಕೊಡೊ  ಬೆಕ್ಕಿನ ಕಣ್ಣು, ರಾಜಮರ್ಯಾದೆ, ಹೀಗೆ ನಾಟಕಗಳ ಸರಪಳಿ..

ಮೈಗೆ ಹೆಂಗೈತೆಲೇ ಮಗsನಾ 
ಕಳಸಲೇನ ಬೆಳಗಾಂ ರೋಡಿಗೆ ಅಂದ್ರ ನಮಗಷ್ಟ ಗೊರ್ತರಿ...

ಅದನ್ನ ದಾಟಿ ಮುಂದ ಹೊದ್ರ ಅಲ್ಲಿ ಕಾಣೋದೇ ಎತ್ತಿನಗುಡ್ಡ ಕಾಲೇಜ್ ಅಂದ್ರ ಕೃಷಿ ವಿಶ್ವ ವಿದ್ಯಾನಿಲಯಾರ್ರೀ..

ಸಪ್ತಾಪುರಭಾವಿ, ಬಾರಾಕೂಟ್ರಿ ದಾಟಿದ್ರ್ ಪ್ರಕೃತಿ ಸೊಬಗಲಿ ಮಿಂದಿಹ ಕರ್ನಾಟಕ ವಿಶ್ವವಿದ್ಯಾನಿಲಯಾರ್ರೀ..

ಧಾರವಾಡಕ್ಕ ಬಂದ್ ಸಾಧನಕೇರಿ ನೋಡ್ದಿದ್ದ್ರ ಅದ್ಯಾವ ಸಾಧನೇರಿ...

ನಮ್ಮೂರಾಗೊಂದು ಅಂಕುಡೊಂಕಿನ ರಸ್ತೆಕ್ಕೂ ಲೈನ್ಬಜಾರ್ ಅಂದಾರ್ರಿ 
ಅಲ್ಲೇ ನೋಡ್ರಿ ವಿಶ್ವಖ್ಯಾತಿಯ ಬಾಬುಸಿಂಗ್ ಠಾಕೂರ ಫೇಢಾ ಹುಟ್ಟಿದ್ರಿ..
ಬಾಲಿವುಡ್ದಲ್ಲಿ ಹೆಸರ ಮಾಡಿರೊ ಧಾರವಾಡ-ಫೇಡಾ ಅದ ಲೀನಾ ಚಂದವರಕರ ಅವರೂ ನಮ್ಮವರರಿ..

 ಹಂಗ ಅದ್ಕೊಂಡ ಸ್ವಲ್ಪ ಮುಂದ ಹೋದ್ರ ನೆನಪಿನ ಬುತ್ತಿ ಬಿಚ್ಚೊ ಸುಭಾಸ್ ರಸ್ತೆರಿ ಮ್ಯಾಲ ನೊಡಿದ್ರ ಕೆಸಿಸಿ ಬ್ಯಾಂಕ್ ಗಡಿಯಾರ, ಅದರ ತಳಗ ಹ್ಯಾಂಗ್ ಮರೆಯಲಿ ಚಪ್ಪರಿಸಿ ತಿಂದಿದ್ದ ಬಾಂಬೆ ರೆಸ್ಟರೆಂಟಿನ್ ತುಪ್ಪದ್ ದ್ವಾಸಿರೀ..

ಹೌದರಿ, ಹಾಲಗೇರಿ ಹಣುಮಪ್ಪನ ಗುಡಿ ಹಿಂದಿನ ಬಾಗಲಾ ತಗದರ ದೊಡ್ಡ ಹಾಲಗೇರಿ`ರಿ, ಅಲ್ಲಿ ಇಡೀದಿವಸ ಅರಬಿಲೇ ಮೀನಾ ಹಿಡಿಲಿಕ್ಕೆ ಹೊಗತಿದ್ವಿರೀ..

ವಿಜಯಾ ಟಾಕೀಸ್ ಹಿಂದ ದೇಸಾಯಿ ಇಲೇಕ್ಟ್ರಿಕ್ ಕಂಪನಿರಿ ಅಲ್ಲಿ ದಿನಾ ರಾತ್ರಿ ಒಂಬತ್ತಕ ಭೊಂಗಾ ಹೊಡಿಯೋದರಿ ಅದನ ಕೇಳ್ಯೆ ಮುಸಕ ಹಾಕೊದರಿ.
ಉತ್ತರ ಹಿಂದುಸ್ತಾನದ ಪಂಡಿತರವಳಗ ಶ್ರೀ ಬಾಲಚಂದ್ರ ಶಾಸ್ತಿಗಳ ಹೆಸರ ಕೇಳಿಬರೋದರಿ,
ಅವರ ನಮ್ಮ ಧಾರವಾಡದವರಿ.

ಮಂಗಳವಾರ ಸಂತಿ,ಅಮ್ಮಿನಗಡ್ಹ್- ನೆಲ್ಲಕಾಯಿ ಗೊಳಂಬ. ದತ್ತಾತ್ರೇಯ ಗುಡಿ ,ಸರಾಫ್ ಬಜಾರ್ ,ರಿಸ್ಪುಡ ಅಂಗಡಿ,ಕೆರಿತೆಳಗಿನ ಓಣಿ ,ಲಕ್ಷ್ಮೀನಾರಾಯಣ ಗುಡಿ ಜಾತ್ರಿ ಮೀರ್ಚಿ-ಗಿರ್ಮಿಟ್, ಭೂಸಪ್ಯಾಟಿ ಗಾಂಭೀರ್ಯವಾಗಿ ಕುಳಿತ ರತಿದೇವಿ-ಕಾಮಣ್ಣ..,
ಮಾಸದ ನೆನಪುಗಳ್ರೀ..

ಮುರುಘಾಮಠಕೊಮ್ಮೆ ಅಡ್ಡಬಿದ್ದ ಮುಂದ ಸಾಗಿದ್ರ ಉಧೋ ಉಧೋ ಯಲ್ಲಮ್ಮ ನೊಡ್ರಿ..

ಒಮ್ಮೆ ಉಸಿರಾಡಿದವಾ ಮತ್ತ ಮತ್ತೆ ಇಲ್ಲೇ ಹುಟ್ಟಬೇಕಂತ ಬಯಸೋ ಊರಿದ್ರಿ. ಪಂಪಕವಿ ಇಲ್ಲಿ ಹುಟ್ಟಿದ್ರ.. *ಆರು ಅಂಕುಶ ವಿಟ್ಟಡೊಂ ನೆನೆಯುವದೆನ್ನ ಮನಂ  ಧಾರವಾಡ ದೇಶಂ* ಅನ್ನತಿದ್ದನೆನೋರಿ...

ಗಂಡುಮೆಟ್ಟಿನ ನಾಡಿನ ಬಗ್ಗೆ ಯೇಟ ಬರೆದ್ರು ಕಡಮಿನರೀ..
 ಜನ್ಮದ ಪುಣ್ಯಾ`ಯೇನೋ ಇಲ್ಲೇ ಆಡಾಡ್ತ ಅಡ್ಯಾಡ್ತ ಬೆಳೆದೇನ್ರಿ...

ಹಕ್ಕಲೆ ಖುಷಿಯಿಂದ ಹೆಳತೇನಿ,
*ಸೌ ಮಾರವಾಡಿ ಎಕ ಧಾರವಾಡಿ ಅಂತ...😊*

ನಿಮ್ಮವ
M P J

No comments:

Post a Comment

Note: Only a member of this blog may post a comment.

Photo gallery

Corp Bank Dharwad Group snaps

Staff Group snaps Posted on 20/07/2020 by:  Zulfikhar Sayed Left to Right: Sitting Savakar, Suman Bhat , B N Shenoy, Ramdas Aithal, Bhavana ...

Popular Posts